ಗಾಡ್ರ್ನರ್, ಸ್ಯಾಮ್ಯುಯೆಲ್ ರಾಸನ್ 1829-1902. ಇಂಗ್ಲಿಷ್ ಇತಿಹಾಸಕಾರ. ಆಲಿವರ್ ಕ್ರಾಮ್ವೆಲ್ ವಂಶಸ್ಥ. 1829ರ ಮಾರ್ಚ್ 4ರಂದು ಹ್ಯಾಂಪ್‍ಷಿರ್‍ನ ಆಲ್ರೆಸ್‍ಫರ್ಡ್‍ನಲ್ಲಿ ಜನಿಸಿದ. ವಿಂಚೆಸ್ಟರಿನಲ್ಲೂ ಆಕ್ಸ್‍ಪರ್ಡಿನ ಕ್ರೈಸ್ಟ್‍ಚರ್ಚ್ ಕಾಲೇಜಿನಲ್ಲೂ ವಿಧ್ಯಾಬ್ಯಾಸ ಮಾಡಿ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಆಧುನಿಕ ಇತಿಹಾಸ ಪ್ರಾಧ್ಯಾಪಕನಾಗಿದ್ದ (1871-1885) 1884ರಲ್ಲಿ ಆಲ್ ಸೋಲ್ಸ್ ಕಾಲೇಜಿನ ಮತ್ತು 1884ರಲ್ಲಿ ಮೆರ್ಟನ್ ಕಾಲೇಜಿನ ಫೆಲೊ ಆಗಿ ಆಯ್ಕೆಗೊಂಡ.

	ಗಾಡ್ರ್ನರ್ ಇಂಗ್ಲೆಂಡಿನ ಅಂತರ್ಯುದ್ಧ ಕಾಲದ ಇತಿಹಾಸವನ್ನು ವಿಶೇಷವಾಗಿ ಅಧ್ಯಯನಮಾಡಿದ. ಈ ಕಾಲಕ್ಕೆ ಸಂಬಂಧಿಸಿದಂತೆ ಹಲವಾರು ಸ್ಥಳಗಳಲ್ಲಿದ್ದ ಮೂಲ ದಾಖಲೆಗಳನ್ನು ಪರಿಶೀಲಿಸಿ 1863 ರಿಂದ 1900ರವರೆಗೆ ಹಲವಾರು ಉದ್ಗ್ರಂಥಗಳನ್ನು ರಚಿಸಿದ. ಒಂದನೆಯ ಜೇಮ್ಸನ ಸಿಂಹಾಸನಾರೋಹಣ ಕಾಲದಿಂದ ಅಂತರ್ಯುದ್ಧದ ಆರಂಭದವರೆಗಿನ ಕಾಲದ ಇತಿಹಾಸವನ್ನು ಕುರಿತು ಹತ್ತು ಸಂಪುಟಗಳೂ ಅಂತರ್ಯುದ್ಧವನ್ನು ಕುರಿತು ಮೂರು ಸಂಪುಟಗಳೂ ಹೊರಬಿದ್ದುವು. ಕಾಮನ್‍ವೆಲ್ತ್ ಮತ್ತು ಪ್ರೊಟೆಕ್ಟೊರೇಟ್ ಕಾಲದ ಸಮಗ್ರ ಚರಿತ್ರೆಯೂ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಯಿತು.

	ಗಾಡ್ರ್ನರನ ಕೃತಿಗಳನ್ನು ವಿಮರ್ಶಕರು ಮೊದಮೊದಲು ಒಪ್ಪಲಿಲ್ಲ. ಆದರೆ ಅವನ ವಿಶ್ಲೇಷಣ ದೃಷ್ಟಿ ಕ್ರಮೇಣ ಮೆಚ್ಚುಗೆ ಗಳಿಸಿತು. 17ನೆಯ ಶತಮಾನದ ಸಾಮಾಜಿಕ ಆರ್ಥಿಕ ಬೌದ್ಧಿಕ ವಿದ್ಯಮಾನಗಳನ್ನು ಅವನು ಸೂಕ್ಷ್ಮವಾಗಿ ಗ್ರಹಿಸಿದ್ದ. ಇಂಗ್ಲೆಂಡಿನ ರಾಷ್ಟ್ರೀಯ ಭಾವನೆಯನ್ನು ಪುರಸ್ಕರಿಸಿ ಬರೆದ ಅವನ ಇತಿಹಾಸ ಈ ಧೋರಣೆಯಿಂದಾಗಿ ಮಹತ್ವ ಗಳಿಸಿದೆ. ಕಾಲಾನುಕ್ರಮಣಿಕೆಯ ವಿಧಾನವನ್ನನುಸರಿಸಿ, ವಿಧ್ಯಮಾನದ ಯಾವ ಮುಖವನ್ನೂ ಕಡೆಗಣಿಸದೆ ಆತ ಮಾಡಿರುವ ನಿರೂಪಣೆಯಿಂದಾಗಿ ಇಂಗ್ಲೆಂಡಿನ ಇತಿಹಾಸದಲ್ಲೇ ಇದು ಅತ್ಯಂತ ಪರಿಚಿತವಾದ ಕಾಲವೆನಿಸಿದೆ. ಮೇಲೆ ಹೇಳಿದ ಗ್ರಂಥಗಳಲ್ಲದೆ ಇನ್ನೂ ಹಲವಾರು ಕೃತಿಗಳನ್ನು ಅವನು ರಚಿಸಿದ್ದಾನೆ. ಇತಿಹಾಸ ಲೇಖನಕ್ಕಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದ ಗಾಡ್ರ್ನರನ ಬಾಳು ಆರ್ಥಿಕವಾಗಿ ಅಷ್ಟೇನು ತೃಪ್ತಿಕರವಾಗಿರಲಿಲ್ಲ. 1882ರ ಅನಂತರ ಅವನಿಗೆ ದೊರಕಿದ ವಿಶ್ರಾಂತಿ ವೇತನದಿಂದ ಸ್ವಲ್ಪ ಅನುಕೂಲವಾಯಿತು. ಅವನ 65ನೆಯ ವಯಸ್ಸಿನಲ್ಲಿ ಆಕ್ಸ್‍ಫರ್ಡಿನಲ್ಲಿ ರೀಜಿಯಸ್ (ವಿದ್ವತ್ ಪೀಠಾಧಿಕಾರಿ) ಪ್ರಾಧ್ಯಾಪಕನ ಸ್ಥಾನವನ್ನು ನೀಡಿದಾಗ ಆತ ಅದನ್ನು ಸ್ವೀಕರಿಸಲಿಲ್ಲ. ಇತಿಹಾಸ ರಚನೆಯ ಕಾರ್ಯಕ್ಕೆ ಅದರಿಂದ ಅಡ್ಡಿಯಾದೀತೆಂಬುದು ಕಾರಣ. ಗಾಡ್ರ್ನರ್ 1902ರಲ್ಲಿ ತೀರಿಕೊಂಡ.													(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ